Powered By Blogger

Tuesday 26 August 2014

ಫೆಲೆಸ್ತೀನ್ ಪರ ದನಿಯೆತ್ತಿದ ಲಿಯೊನೆಲ್ ಮೆಸ್ಸಿ


ಇಸ್ರೇಲ್-ಗಾಝಾ ಸಂಘರ್ಷದಲ್ಲಿ ಫೆಲೆಸ್ತೀನ್ ಸಂತ್ರಸ್ತರ ಪರವಾಗಿ ದನಿಯೆತ್ತಿದ ಬಳಿಕ ಖ್ಯಾತ ಫುಟ್ಬಾಲಿಗ ಲಿಯೊನೆಲ್ ಮೆಸ್ಸಿ ಸ್ವತಃ ತಾನೆ ಸಂತ್ರಸ್ತನಾಗಿದ್ದಾರೆ. ಗಾಝಾದಲ್ಲಿನ ಹಿಂಸೆ ಕೊನೆಗೊಳ್ಳಬೇಕೆಂದು ಅರ್ಜೆಂಟೀನ ಮತ್ತು ಬಾರ್ಸಿಲೋನ ತಾರೆ ತನ್ನ ಫೇಸ್‌ಬುಕ್ ಪುಟದಲ್ಲಿ ಕರೆನೀಡಿದ್ದರು. ತನ್ನ ಫೇಸ್‌ಬುಕ್ ಪುಟದಲ್ಲಿ ಮೆಸ್ಸಿ ಗಾಯಗೊಂಡ ಫೆಲೆಸ್ತೀನ್ ಬಾಲಕನೊಬ್ಬನ ಚಿತ್ರವನ್ನು ಹಾಕಿದ್ದರು. ಇದರಿಂದ ಅಸಮಾಧಾನಗೊಂಡ ಇಸ್ರೇಲಿ ಪರ ಸಾಮಾಜಿಕ ಜಾಲತಾಣಗಳ ಬಳಕೆದಾರರು ಇಸ್ರೇಲಿ ಸಂತ್ರಸ್ತರ ಪರವಾಗಿಯೂ ಇದೇ ರೀತಿಯ ಹೇಳಿಕೆಯನ್ನು ನೀಡುವಂತೆ ಮೆಸ್ಸಿಯನ್ನು ಒತ್ತಾಯಿಸಿದ್ದಾರೆ. ‘‘ಈ ಸಂಘರ್ಷಕ್ಕೆ ಮಕ್ಕಳು ಕಾರಣರಲ್ಲ. ಆದರೆ, ಇದಕ್ಕೆ ಬೆಲೆ ತೆರುತ್ತಿರುವವರು ಮಕ್ಕಳು. ಈ ಮತಿಹೀನ ಹಿಂಸಾಚಾರದ ಸರಪಳಿ ನಿಲ್ಲಬೇಕು. ಸೇನಾ ಸಂಘರ್ಷಗಳ ಪರಿಣಾಮಗಳ ಬಗ್ಗೆ ನಾವು ಯೋಚಿಸಬೇಕು ಹಾಗೂ ಮಕ್ಕಳನ್ನು ರಕ್ಷಿಸಬೇಕು’’ ಎಂದು ಮೆಸ್ಸಿ ಹೇಳಿದ್ದಾರೆ. ‘‘ಓರ್ವ ತಂದೆಯಾಗಿ ಹಾಗೂ ಯೂನಿಸೆಫ್ ಸದ್ಭಾವನಾ ರಾಯಭಾರಿಯಾಗಿ ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವಿನ ಸಂಘರ್ಷ ಹುಟ್ಟುಹಾಕಿರುವ ಪರಿಸ್ಥಿತಿಯನ್ನು ನೋಡಿ ನಾನು ನಡುಗಿಹೋಗಿದ್ದೇನೆ. ಇಲ್ಲಿನ ಹಿಂಸೆ ಈವರೆಗೆ ಅದೆಷ್ಟೋ ಎಳೆಯ ಜೀವಗಳನ್ನು ಹೊಸಕಿ ಹಾಕಿದೆ ಹಾಗೂ ಅಸಂಖ್ಯ ಮಕ್ಕಳನ್ನು ಗಾಯಗೊಳಿಸಿದೆ’’ ಎಂದು ಆಗಸ್ಟ್ 7ರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಫುಟ್ಬಾಲ್ ತಾರೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಇಸ್ರೇಲ್ ಪರ ಸಾಮಾಜಿಕ ತಾಣ ಬಳಕೆದಾರರು, ಗಾಝಾದಿಂದ ಹಾರಿಸಲಾದ ಮೋರ್ಟಾರ್ ಶೆಲ್ ದಾಳಿಯಲ್ಲಿ ಹತನಾಗಿರುವ ಇಸ್ರೇಲ್‌ನ ನಾಲ್ಕು ವರ್ಷದ ಮಗು ಡೇನಿಯಲ್ ಟ್ರೆಗರ್‌ಮನ್ ಘಟನೆಯನ್ನೂ ಖಂಡಿಸುವಂತೆ ಮೆಸ್ಸಿಗೆ ಕರೆ ನೀಡಿದ್ದಾರೆ. ಈಗ ಮೆಸ್ಸಿಯ ಮೂಲ ಫೇಸ್‌ಬುಕ್ ಪೋಸ್ಟನ್ನು ತೆಗೆದಿರುವಂತೆ ಕಾಣುತ್ತಿದೆ. ಆದರೆ, ಮೆಸ್ಸಿ ಅಭಿಮಾನಿ ಪುಟಗಳಲ್ಲಿ ಅದನ್ನು ಈಗಲೂ ನೋಡಬಹುದಾಗಿದೆ. ಮೆಸ್ಸಿ ಅಭಿಮಾನಿಯಾಗಿರುವ ಟ್ರೆಗರ್‌ಮನ್, ಜುಲೈ 8ರಂದು ಇಸ್ರೇಲ್ ಫೆಲೆಸ್ತೀನ್ ಮೇಲೆ ಬಾಂಬ್ ದಾಳಿ ನಡೆಸಲು ಆರಂಭಿಸಿದಂದಿನಿಂದ ಮೃತಪಟ್ಟ ಏಕೈಕ ಇಸ್ರೇಲ್‌ನ ಮಗು ಎನ್ನಲಾಗಿದೆ. ಮೆಸ್ಸಿಯ ಬಾರ್ಸಿಲೋನ ಜರ್ಸಿಯನ್ನು ಧರಿಸಿರುವ ಮಗುವಿನ ವಿವಿಧ ಚಿತ್ರಗಳನ್ನು ಸಾಮಾಜಿಕ ತಾಣಗಳಲ್ಲಿ ಹಾಕಲಾಗಿದೆ. ಸಂಘರ್ಷದಲ್ಲಿ ಈವರೆಗೆ ಕನಿಷ್ಠ 2,097 ಫೆಲೆಸ್ತೀನಿಯರು ಮೃತಪಟ್ಟಿದ್ದಾರೆ. ಅವರ ಪೈಕಿ ಹೆಚ್ಚಿನವರು ಮಕ್ಕಳೇ ಆಗಿದ್ದಾರೆ. 68 ಇಸ್ರೇಲಿಗರೂ ಪ್ರಾಣ ಕಳೆದುಕೊಂಡಿದ್ದಾರೆ.

No comments:

Post a Comment